ಕರ್ಷಕ (ವಿದ್ಯುತ್) : ವಿದ್ಯುಚ್ಛಕ್ತಿಯ ನೆರವಿನಿಂದ ಚಲಿಸುವ ವಾಹನ (ಟ್ರ್ಯಾಕ್ಟರ್). ವಿದ್ಯುತ್ ಕರ್ಷಕಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದರಲ್ಲಿ ವಾಹನಗಳು ವಿದ್ಯುಚ್ಛಕ್ತಿಯನ್ನು ವಿದ್ಯುಜ್ಜಾಲದಿಂದ ಪಡೆಯುತ್ತವೆ; ಎರಡನೆಯದರಲ್ಲಿ ವಾಹನಗಳು ತಮಗೆ ಬೇಕಾಗುವ ವಿದ್ಯುಚ್ಛಕ್ತಿಯನ್ನು ಸ್ವಂತ ವಿದ್ಯುಜ್ಜನಕಗಳಿಂದ ಉತ್ಪಾದಿಸಿಕೊಳ್ಳುತ್ತವೆ. ಡೀಸಲ್ ವಿದ್ಯುತ್ ಬಂಡಿಗಳು ಇದಕ್ಕೆ ಒಂದು ಉದಾಹರಣೆ. ಟ್ರ್ಯಾಕ್ಟರ್ಗಳನ್ನು ವ್ಯವಸಾಯ, ಕಟ್ಟಡಗಳು ಮತ್ತು  ರಸ್ತೆ ನಿರ್ಮಾಣದಲ್ಲಿ ಉಪಯೋಗಿಸಲಾಗುತ್ತದೆ.

ವಿದ್ಯುತ್ ಕರ್ಷಕಗಳು ಇತರ ಕರ್ಷಕಗಳಿಂದ (ಟ್ರ್ಯಾಕ್ಟರ್ಸ್‌) ಹೆಚ್ಚು ವಿಶಿಷ್ಟವಾಗಿವೆ. ಕಾರಣ: ೧ ಇವುಗಳಲ್ಲಿ ವೇಗೋತ್ಕರ್ಷ ಮತ್ತು ವೇಗಾಪಕರ್ಷಗಳನ್ನು ಪಡೆಯುವುದು ಬಲು ಸುಲಭ. ದೂರದ ಪರಿಮಿತಿ ಕಡಿಮೆಯಿದ್ದಾಗ ಮತ್ತು ನಿಲ್ದಾಣಗಳು ಒಂದಕ್ಕೊಂದು ಸಮೀಪದಲ್ಲಿರುವ ದಾರಿಗಳಲ್ಲಿ ವಿದ್ಯುತ್ ಕರ್ಷಕಗಳು ತುಂಬ ಉಪಯುಕ್ತವಾಗುತ್ತವೆ. ೨ ಇವುಗಳಲ್ಲಿ ಹೊಗೆ ಉಂಟಾಗದು. ಆದ್ದರಿಂದ ವಿದ್ಯತ್ಕರ್ಷಕಗಳು ವಾಯುಮಂಡಲವನ್ನು ಕಲುಷಿತಗೊಳಿಸುವುದಿಲ್ಲ. ಹಾಗಾಗಿ ಉಪನಗರಗಳ ನಡುವಣ ಸುರಂಗಮಾರ್ಗಗಳಿಗೆ ಇವು ಅತ್ಯುಪಯುಕ್ತ. ೩ ಇವುಗಳ ಕ್ರಿಯಾವೆಚ್ಚ ಕಡಿಮೆ. ೪ ಹತೋಟಿ ಬಲು ಸುಲಭ. ಆದರೆ ವಿದ್ಯುತ್ ಕರ್ಷಕಗಳ ಪ್ರಾರಂಭಿಕ ವೆಚ್ಚ ದುಬಾರಿಯದು. ಹೆಚ್ಚು ವಿದ್ಯುಜ್ಜಾಲಗಳಿಂದ ಶಕ್ತಿಯನ್ನು ಪಡೆಯುವ ಕರ್ಷಕಗಳಲ್ಲಿ ವಿದ್ಯುತ್ ಸರಬರಾಜು ಮಧ್ಯೆ ಮಧ್ಯೆ ನಿಂತುಹೋದರೆ ಚಲನೆಯೇ ಸ್ಥಗಿತವಾಗುವುದು. 

ಡೀಸಲ್ ವಿದ್ಯುತ್ ಕರ್ಷಕಗಳಲ್ಲಿ ಸ್ವಂತ ಡೀಸಲ್ ಯಂತ್ರಗಳು ಇರುತ್ತವೆ. ಇವು ವಿದ್ಯುಜ್ಜನಕಗಳಿಗೆ ಸಂಯೋಜಿತವಾಗಿರುವುದರಿಂದ ವಿದ್ಯುಚ್ಛಕ್ತಿ ಉತ್ಪನ್ನವಾಗುವುದು. ಈ ವಿದ್ಯುಚ್ಛಕ್ತಿ ವಿದ್ಯುಚ್ಚಾಲಕಗಳಿಗೆ ಚಲನಶಕ್ತಿಯನ್ನು ಕೊಡುತ್ತದೆ. ವಿದ್ಯುತ್ ಕೋಶಗಳಿಂದ ಶಕ್ತಿಯನ್ನು ಪಡೆಯುವ ವಾಹನಗಳು ಕಡಿಮೆ ತೂಕದ ವಸ್ತುಗಳ ಸಾಗಾಣಿಕೆಗೆ ಉಪಯುಕ್ತವಾಗಿವೆ.

ವಿದ್ಯುತ್ ಸರಬರಾಜು
ಏಕಮುಖಿ ಪ್ರವಾಹ (ಡಿ.ಸಿ) ಅಥವಾ ಪರ್ಯಾಯ ಪ್ರವಾಹವನ್ನು (ಎ.ಸಿ) ಬಳಸಬಹುದು. ಪರ್ಯಾಯ ಪ್ರವಾಹದಲ್ಲಿ ಒಂದು ಅಥವಾ ಮೂರು ಪ್ರಾವಸ್ಥೆಗಳನ್ನು (ಫೇಸಸ್) ಬಳಸಬಹುದು. ಏಕಮುಖ ಪ್ರವಾಹದ ವಿದ್ಯುತ್ ಕರ್ಷಕದಲ್ಲಿ ವೋಲ್ಟೇಜ್ ಸಾಮಾನ್ಯವಾಗಿ ಇರುತ್ತದೆ. ಕೆಲವೆಡೆ ವೋಲ್ಟೇಜನ್ನು ಸಹ ಉಪಯೋಗಿಸುವುದಿದೆ. ಪರ್ಯಾಯ ಪ್ರವಾಹದ ಒಂದು ಸರಬರಾಜಿನಲ್ಲಿ ವೋಲ್ಟೇಜ್ ಸಾಮಾನ್ಯವಾಗಿ ೧೫-೨೫ ಕಿಲೋವ್ಯಾಟ್ ಇರುತ್ತದೆ ಮತ್ತು ಆವರ್ತಾಂಕ ಆವೃತ್ತಿ (ಫ್ರೀಕ್ವೆನ್ಸಿ) ೫೦/೩, ೫೦/೨ ಅಥವಾ ೫೦/೧ ಇರುತ್ತದೆ. ಭಾರತದಲ್ಲಿ ಬಳಕೆಯಲ್ಲಿರುವ ಆವೃತ್ತಾಂಕ ೫೦ಹಟ್ರ್ಸ್‌. ಮೂರು ಅವಸ್ಥೆಯ ಪರ್ಯಾಯ ಪ್ರವಾಹದ ಸರಬರಾಜಿದ್ದರೆ ಪ್ರೇರಿತ ಚಾಲಕಗಳನ್ನು (ಇಂಡಕ್ಷನ್ ಮೋಟಾರ್ಸ್‌) ಉಪಯೋಗಿಸಬಹುದು. ಇವುಗಳ ದಕ್ಷತೆಯಿಂದಾಗಿ (ಎಫಿಷಿಯೆನ್ಸಿ) ಅವುಗಳ ಉಪಯೋಗ ಅನಿವಾರ್ಯ. ಅಲ್ಲದೆ ಸಮಶ್ಚರ ವೇಗವನ್ನು (ಸಿಂಕ್ರೊನಸ್ ಸ್ಪೀಡ್) ಮೀರಿ ಅವು ತಿರುಗಿದಾಗ ವಿದ್ಯುಜ್ಜನಕದಂತೆ ವರ್ತಿಸುತ್ತವೆ. ರೆಕ್ಟಿಫೈಯರ್ ಮತ್ತು ಪ್ರೇರಿತ ಚಾಲಕಗಳಲ್ಲಿ ಎಷ್ಟು ಪ್ರಗತಿಯಾಗಿದೆಯೆಂದರೆ ಕರ್ಷಕಗಳಿಗೆ ಯಾವುದು ಅತ್ಯುಪಯುಕ್ತ ಎಂದು ಹೇಳುವುದು ಕಷ್ಟ.

ಏಕಮುಖ ಪ್ರವಾಹ ಕರ್ಷಕ
ಏಕಮುಖ ಪ್ರವಾಹದ ಕರ್ಷಕದಲ್ಲಿ ಶ್ರೇಣಿ (ಸೀರೀಸ್) ಅಥವಾ ಷಂಟ್ ಚಾಲಕಗಳನ್ನು ಉಪಯೋಗಿಸಬಹುದು. ಇಂಥ ಚಾಲಕಗಳ ರಚನೆ ಬಹಳ ಭದ್ರವಾಗಿರಬೇಕು. ನೀರು ಮತ್ತು ಕೆಸರಿನಿಂದ ಚಾಲಕಕ್ಕೆ ರಕ್ಷಣೆ ಬೇಕು. ಷಂಟ್ ಚಾಲಕಕ್ಕಿಂತ ಶ್ರೇಣಿ ಚಾಲಕ ಹೆಚ್ಚು ಉಪಯುಕ್ತ. ಕಾರಣ: ೧ ಪ್ರಾರಂಭದಲ್ಲಿ, ಎಂದರೆ ಚಾಲಕಗಳನ್ನು ತಿರುಗಿಸಲು ಎಳೆಸಿದಾಗ, ಶ್ರೇಣಿಚಾಲಕ ಷಂಟ್ ಚಾಲಕಕ್ಕಿಂತ ಹೆಚ್ಚು ಭ್ರಾಮಕತೆಯನ್ನು (ಟಾರ್ಕ್) ಉಂಟುಮಾಡಬಹುದು. ೨ ಚಾಲನಶಕ್ತಿ ಅಧಿಕವಾಗದಾಗ ತನ್ನಿಂದ ತಾನೇ ವೇಗ ಕಡಿಮೆಯಾಗುವುದು. ಇದರಿಂದಾಗಿ ಚಾಲಕಕ್ಕೆ ಹೇರುವ ತೂಕ ನಿಯಮಿತವಾಗಿರುವುದು. 

ಏಕಮುಖ ಪ್ರವಾಹ ಚಾಲಕದ ಚಾಲನೆ ಮತ್ತು ವೇಗನಿಯಂತ್ರಣ
ಏಕಮುಖ ಶ್ರೇಣಿ (ಸೀರೀಸ್) ಚಾಲಕದ ವೇಗವನ್ನು ಬದಲಾಯಿಸಲು ಅದರ ಕ್ಷೇತ್ರವನ್ನು (ಫೀಲ್ಡ್‌) ಅಥವಾ ಅದರ ವೋಲ್ಟತೆಯನ್ನು ಬದಲಾಯಿಸಿದರೆ ಸಾಕು. ಚಾಲಕದ ವೋಲ್ಟತೆಯನ್ನು ನಿಯಂತ್ರಿಸಲಯ ಶ್ರೇಣಿ ನಿರೋಧಕ ಅಥವಾ ಶ್ರೇಣಿ-ಸಮಾಂತರ (ಸೀರೀಸ್-ಪ್ಯಾರಲಲ್) ನಿರೋಧಕ ಅಥವಾ ಮೆಟಾಡೈನನ್ನು ಉಪಯೋಗಿಸಬಹುದು. ಶ್ರೇಣಿಚಾಲಕದೊಡನೆ ಶ್ರೇಣಿಯಲ್ಲಿ ನಿರೋಧಕವನ್ನು ಸೇರಿಸಿ ಚಾಲಕವನ್ನು ಚಲಿಸುವುದರಿಂದ ಆ ಶ್ರೇಣಿನಿರೋಧಕದಲ್ಲಿ ಅನಗತ್ಯವಾಗಿ ಶಕ್ತಿನಷ್ಟವಾಗುವುದು. ಎರಡು ಅಥವಾ ಹೆಚ್ಚು ಚಾಲಕಗಳಿದ್ದಾಗ ಶ್ರೇಣಿ-ಸಮಾಂತರ ವಿಧಾನವನ್ನು ಉಪಯೋಗಿಸುವುದರ ಮೂಲಕ ಮೇಲೆ ಹೇಳಿರುವ ಶಕ್ತಿವ್ಯಯವನ್ನು ಕಡಿಮೆ ಮಾಡಬಹುದು. ಮೊದಲು ಎರಡು ಚಾಲಕಗಳನ್ನೂ ಒಂದು ನಿಯಂತ್ರಣ ನಿರೋಧಕವನ್ನೂ ಶ್ರೇಣಿಯಲ್ಲಿ ಸೇರಿಸಿ ಚಾಲಕಗಳನ್ನು ಅವುಗಳ ನಿಯಮಿತ ವೇಗದ ಅರ್ಧಕ್ಕೆ ಕೊಂಡೊಯ್ಯಲಾಗುವುದು. ಆ ಬಳಿಕ ಅವನ್ನು ಸಮಾಂತರವಾಗಿ ಸೇರಿಸಿ ನಿಯಮಿತ ವೇಗಕ್ಕೆ ತರಲಾಗುವುದು.

ಪರ್ಯಾಯ ಪ್ರವಾಹ ಚಾಲಕಗಳು
ಇವುಗಳಲ್ಲಿ ಒಂದು ಅವಸ್ಥೆ (ಫೇಸ್) ಮತ್ತು ಮೂರು ಅವಸ್ಥೆ ಇರುವ ಚಾಲಕಗಳನ್ನು ಬಳಸಬಹುದು. ಒಂದು ಅವಸ್ಥೆಯ ಚಾಲಕಗಳು ಹೆಚ್ಚಾಗಿ ಪರಿವರ್ತಕವುಳ್ಳ (ಕಾಮ್ಯುಟೇಟರ್) ರೀತಿಯವು. ಶ್ರೇಣಿ ಚಾಲಕದಲ್ಲಿ ಒಂದು ಕಾಂತಮಂಡಲ (ಮ್ಯಾಗ್ನೆಟಿಕ್ ಸರ್ಕಿಟ್) ಮತ್ತು ಪರಿವರ್ತಕ ಬ್ರಶ್ಯುಗಳನ್ನು ಒಳಗೊಂಡ ಆರ್ಮೆಚರ್ ಇರುತ್ತವೆ. ಕಾಂತಮಂಡಲದ ಮುಖ್ಯ ಸುರುಳಿಯನ್ನು (ಮೇನ್ ವೈಂಡಿಂಗ್) ಆರ್ಮೆಚರಿನೊಡನೆ ಶ್ರೇಣಿಯಲ್ಲಿ ಸೇರಿಸಲಾಗುತ್ತದೆ. ಮೂರು ಅವಸ್ಥೆಯ ಪರ್ಯಾಯಪ್ರವಾಹಚಾಲಕವಾಗಿ ಪ್ರೇರಕಚಾಲಕವನ್ನು ಬಳಸುತ್ತಾರೆ.
ಪರ್ಯಾಯ ಪ್ರವಾಹ ಚಾಲಕಗಳ ಚಾಲನೆ
ಶ್ರೇಣಿಚಾಲಕಗಳ ಚಲನಾರಂಭ (ಸ್ಟಾರ್ಟಿಂಗ್) ಮಾಡಲು ಟ್ರಾನ್ಸ್‌ಫಾರ್ಮರುಗಳನ್ನು ಉಪಯೋಗಿಸಬಹುದು. ಇವನ್ನು ಬಳಸಿದಾಗ ಪ್ರಾರಂಭದಲ್ಲಿ ಚಾಲಕಕ್ಕೆ ಕಡಿಮೆ ವೋಲ್ಟತೆಯನ್ನು ವಿದ್ಯುತ್ತನ್ನು ಒದಗಿಸಿ ಬಳಿಕ ನಿಯಮಿತ ವೋಲ್ಟತೆಯ ವಿದ್ಯುತ್ತನ್ನು ಒದಗಿಸಬಹುದು. ಟ್ರಾನ್ಸ್‌ಫಾರ್ಮರನ್ನು ಉಪಯೋಗಿಸಿ ಶ್ರೇಣಿಚಾಲಕಕ್ಕೆ ನೀಡುವ ವಿದ್ಯುತ್ ವೋಲ್ಟತೆಯನ್ನು ನಿಯಂತ್ರಿಸುವುದರ ಮೂಲಕ ಚಾಲಕಗಳ ವೇಗವನ್ನು ನಿಯಂತ್ರಿಸಬಹುದು. 
ಮೂರು ಅವಸ್ಥೆಯ ಚಾಲಕಗಳ ಚಲನಾರಂಭವನ್ನು ಮಾಡಲು ಅವುಗಳ ರೋಟರಿನ ಮಂಡಲದಲ್ಲಿ ನಿರೋಧಕಗಳನ್ನು ಸೇರಿಸುತ್ತಾರೆ. ವೇಗವನ್ನು ನಿಯಂತ್ರಿಸಲು ಎರಡು ಮಾರ್ಗಗಳಿವೆ: ೧ ಧ್ರುವಗಳನ್ನು ಬದಲಾಯಿಸುವುದರ ಮೂಲಕ, ೨ ಕ್ಯಾಸ್ಕೇಡ್ ಮೂಲಕ.

ಪ್ರೇರಕಚಾಲಕದ ವೇಗಧ್ರುವಗಳ ಸಂಖ್ಯೆಗಳಿಗನುಗುಣವಾಗಿ ಬದಲಾಗುವುದರಿಂದ ಆ ಸಂಖ್ಯೆಗಳನ್ನು ಬದಲಾಯಿಸಿ ವೇಗವನ್ನು ನಿಯಂತ್ರಿಸಬಹುದು. ಕ್ಯಾಸ್ಕೇಡ್ ರೀತಿಯ ವೇಗನಿಯಂತ್ರಣಕ್ಕೆ ಎರಡು ಪ್ರೇರಕಚಾಲಕಗಳು ಅಗತ್ಯ. ಇವುಗಳ ಎರಡು ರೋಟರುಗಳನ್ನೂ ಭದ್ರವಾಗಿ ಯಾಂತ್ರಿಕವಾಗಿ (ಮೆಕ್ಯಾನಿಕಲಿ) ಜೋಡಿಸುತ್ತಾರೆ. ಮೊದಲನೆಯ ಚಾಲಕದ ಸ್ಟಾರ್ಟರಿಗೆ ಮೂರು ಅವಸ್ಥೆಗಳ ವೋಲ್ಟೇಜನ್ನು ಕೊಡಲಾಗುವುದು. ಇದರ ರೋಟರನ್ನು ಎರಡನೆಯ ಮೋಟಾರಿನ ಸ್ಟಾರ್ಟರಿಗೆ ಸೇರಿಸಲಾಗುವುದು. ಇದರಿಂದ ಒಟ್ಟು ನಾಲ್ಕು ವಿವಿಧ ವೇಗಗಳನ್ನು ಪಡೆಯಲು ಸಾಧ್ಯ.

ಬಿರಿ
ಬಂಡಿಯ ವೇಗವನ್ನು ಕಡಿಮೆ ಮಾಡಲು ಯಾಂತ್ರಿಕ ಅಥವಾ ವಿದ್ಯುತ್ ಬಿರಿಗಳನ್ನು (ಬ್ರೇಕ್ಸ್‌) ಉಪಯೋಗಿಸಬಹುದು. ಯಾಂತ್ರಿಕ ಬಿರಿಗಳನ್ನು ಅಧಿಕ ಒತ್ತಡದ ಗಾಳಿಯ ಮೂಲಕ ನಡೆಸುತ್ತಾರೆ. ವಿದ್ಯುತ್ ಬಿರಿಯನ್ನು ಮೂರು ವಿಧದಲ್ಲಿ ಕಾರ್ಯರೂಪಕ್ಕೆ ತರಬಹುದು : ೧ ಗತಿ ಪಲ್ಲಟ, ೨ ನಿರೋಧಕ ಬಿರಿ (ರಿಯೋಸ್ಟ್ಯಾಟ್ ಬ್ರೇಕಿಂಗ್), ೩ ಪುನರುತ್ಪಾದಕ ಬಿರಿ (ರೀಜನರೇಟಿವ್ ಬ್ರೇಕಿಂಗ್). 
ಗತಿಪಲ್ಲಟದ ವಿಧಾನದಲ್ಲಿ ಚಾಲಕದ ತಿರುಗುವ ದಿಕ್ಕನ್ನು ಬದಲಾಯಿಸಲಾಗುವುದು. ಇದರಿಂದಾಗಿ ಚಾಲಕ ಸ್ಥಗಿತವಾಗುವುದು. ನಿರೋಧಕ ಬಿರಿಯ ವಿಧಾನದಲ್ಲಿ ಚಾಲಕಕ್ಕೆ ವಿದ್ಯುತ್ ಸರಬರಾಜನ್ನು ತಪ್ಪಿಸಿ ಅದನ್ನು ಒಂದು ನಿರೋಧಕಕ್ಕೆ ಸೇರಿಸಲಾಗುವುದು. ಈಗ ಇದು ವಿದ್ಯುಜ್ಜನಕದಂತೆ ವರ್ತಿಸಿ ಚಲನಶಕ್ತಿಯನ್ನು (ಕೈನೆಟಿಕ್ ಎನರ್ಜಿ) ನಿರೋಧಕಕ್ಕೆ ವರ್ಗಾಯಿಸುವುದು. ಪ್ರೇರಕಚಾಲಕವನ್ನು ಉಪಯೋಗಿಸುವುದರಿಂದ ಮಾತ್ರ ಪುನರುತ್ಪಾದಕ ಬಿರಿಯ ಪ್ರಯೋಗ ಸಾಧ್ಯ. ಚಾಲಕದ ವೇಗ ನಿಯಮಿತ ವೇಗವನ್ನು ಮೀರಿದಾಗ ಅದು ವಿದ್ಯುಜ್ಜನಕದಂತೆ ವರ್ತಿಸುತ್ತದೆ ಮತ್ತು ಶೇಕಡ ೨೦ರಷ್ಟು ಶಕ್ತಿಯನ್ನು ಹಿಂತಿರುಗಿಸುತ್ತದೆ.

ವಿದ್ಯುತ್ ಬಂಡಿಗಳಿಗೆ ವಿದ್ಯುತ್ತಿನ ಪೂರೈಕೆ
ವಿದ್ಯುತ್ತಿನ ಪೂರೈಕೆ ಎರಡು ವಿಧಗಳಿಂದ ಸಾಧ್ಯ. ಮೊದಲನೆಯ ವಿಧಾನದಲ್ಲಿ ವಿದ್ಯುತ್ವಾಹಕಗಳು ಕಂಬಗಳ ಮೇಲಿರುತ್ತವೆ. ವಾಹಕವನ್ನು ತಾಗಿಕೊಂಡು ಜಾರುವ ಒಂದು ಸಾಧನ ಬಂಡಿಗೆ ವಿದ್ಯುತ್ತನ್ನು ಪುರೈಸುವುದು. ರೈಲ್ವೇ ಕಂಬಿ ಎರಡನೆಯ ವಿದ್ಯುದ್ವಾಹಕವಾಗಿ ವರ್ತಿಸುವುದು. ಹಾಗಾಗಿ ಕಂಬದಲ್ಲಿ ಒಂದೇ ಒಂದು ವಿದ್ಯುದ್ವಾಹಕ ಸಾಕಾಗುತ್ತದೆ. ೧೫೦೦ ವೋಲ್ಟತೆ ಅಥವಾ ಅದಕ್ಕಿಂತ ಹೆಚ್ಚಿರುವಲ್ಲಿ ಈ ವಿಧದ ಪೂರೈಕೆ ಅಗತ್ಯ. ಎರಡನೆಯ ವಿಧದ ವಿದ್ಯುತ್ ಪೂರೈಕೆ ವೋಲ್ಟತೆ ೮೦೦ ಗಿಂತ ಕಡಿಮೆಯಿದ್ದಾಗ ಬಳಕೆಗೆ ತರುವಂಥದು. ಇದರಲ್ಲಿ ಚಕ್ರಗಳು ಚಲಿಸುವ ಕಂಬಗಳ ಜೊತೆಗೆ ಪಕ್ಕದಲ್ಲಿ ಇನ್ನೊಂದು ಕಂಬಿಯೂ ಇರುತ್ತದೆ. ಇದು ವಿದ್ಯುತ್ತಿನ ಪೂರೈಕೆಯನ್ನು ಮಾಡುವುದು. ಇದರಲ್ಲೂ ರೈಲ್ವೆ ಕಂಬಿ ಎರಡನೆಯ ವಿದ್ಯುದ್ವಾಹಕವಾಗಿ ವರ್ತಿಸುವುದು.                                     (ಎಂ.ಎಚ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ